ಡಕಾರ್
ಸೆನಿಗಾಲ್ ಗಣರಾಜ್ಯದ ರಾಜಧಾನಿ, ಆಫ್ರಿಕದ ಪಶ್ಚಿಮ ಕರಾವಳಿಯ ಒಂದು ಮುಖ್ಯ ಬಂದರು. ಆಫ್ರಿಕ ಖಂಡದ ಪಶ್ಚಿಮದ ತುದಿಯಾದ ಕೇಪ್ ವರ್ಡ್ ಪರ್ಯಾಯದ್ವೀಪದ ಆಗ್ನೇಯ ಭಾಗದಲ್ಲಿ, ಸೆನಿಗಾಲ್ ಮತ್ತು ಗ್ಯಾಂಬೀಯ ನದಿಗಳ ನಡುವೆ ಇದೆ. ಯೂರೋಪಿಗೂ ದಕ್ಷಿಣ ಆಫ್ರಿಕ ಹಾಗೂ ದಕ್ಷಿಣ ಅಮರಿಕಗಳಿಗೂ ಸಮುದ್ರದಮಾರ್ಗದ ನಡುವೆ ಇರುವ ಈ ಪಟ್ಟಣವು ಹಡಗುಗಳಿಗೂ ವಿಮಾನಗಳಿಗೂ ಒಂದು ಮುಖ್ಯ ತಂಗುದಾಣ. ಪಶ್ಚಿಮ ಆಫ್ರಿಕದ ಅತ್ಯುತ್ತಮ ಬಂದರುಗಳಲ್ಲೊಂದು ಇಲ್ಲಿಯದು. ಪ್ಯಾರಿಸ್, ಲಿಸ್ಬನ್, ಬ್ವೇನಸ್ ಆರೀಸ್, ನ್ಯೂಯಾರ್ಕ್, ಜೊಹ್ಯಾನಿಸ್‍ಬರ್ಗ್‍ಗಳಿಗೆ ವಿಮಾನ ಸಂಪರ್ಕವುಂಟು. ಮಳೆಯಿಲ್ಲದ ಕಾಲದಲ್ಲಿ ಇಲ್ಲಿಂದ ಆಫ್ರಿಕದ ಹಲವು ಮುಖ್ಯ ಪಟ್ಟಣಗಳಿಗೆ ಹೋಗಿ ಬರಲು ಮೋಟಾರು ರಸ್ತೆಗಳಿವೆ. ಗ್ಯಾಂಬೀಯದ ಮೂಲಕ ಜೀóಗಾನ್‍ಷಾರ್‍ಗೂ ಸೇಂಟ್ ಲೂಯಿ ಮತ್ತು ಟೂಬಕ್ಕೂ ಟಾರು ರಸ್ತೆಗಳಿವೆ. ಇದರ ಸ್ಥಾನಮಹತ್ತ್ವದಿಂದಾಗಿ ಇದು ನೌಕಾ ಹಾಗೂ ವಿಮಾನ ನೆಲೆಯಾಗಿ ಬೆಳವಣಿಗೆ ಹೊಂದಿದೆ. ಫ್ರೆಂಚ್ ಸಾಗರೋತ್ತರ ಸಾಮ್ರಾಜ್ಯದ ಮುಖ್ಯ ರಾಜಧಾನಿಗಳಲ್ಲೊಂದಾದ ಈ ನಗರವು ಸೆನಿಗಾಲಿನ ಸ್ವಾತಂತ್ರ್ಯಾನಂತರವೂ ಪಶ್ಚಿಮ ಆಫ್ರಿಕ ಪ್ರದೇಶದ ಹಣಕಾಸಿನ ಹಾಗೂ ವಾಣಿಜ್ಯದ ಮುಖ್ಯ ಕೇಂದ್ರವಾಗಿ ಮುಂದುವರಿದಿದೆ. ಜನಸಂಖ್ಯೆ 5,80,000 (1970).

ಪರ್ಯಾಯದ್ವೀಪದ ತುದಿಯಲ್ಲಿ ನಗರ ಇರುವುದರಿಂದ ಸಮುದ್ರದ ತಂಪಾದ ಗಾಳಿ ಇದರ ಮೇಲೆ ಬೀಸುತ್ತದೆ. ಇಲ್ಲಿಯದು ಹಿತಕರವಾದ ವಾಯುಗುಣ. ಯೂರೋಪಿನವರು ಇದರಿಂದ ಆಕರ್ಷಿತರಾದರು. ಈ ನಗರ ಬಹಳ ಮಟ್ಟಿಗೆ ಯೂರೋಪಿನ ಒಂದು ನಗರದಂತೆಯೇ ಇದೆ.

ಈ ನಗರ ಸ್ಥಾಪಿತವಾದ್ದು 1857ರಲ್ಲಿ. ಫ್ರೆಂಚರು ಆಗ ಇಲ್ಲಿ ಕೋಟೆಯೊಂದನ್ನು ಕಟ್ಟಿದ್ದರು. ಸುಮಾರು ಎರಡು ದಶಕಗಳಷ್ಟು ಹಿಂದಿನಿಂದ ಇಲ್ಲಿ ಅವರು ವ್ಯಾಪಾರಚಟುವಟಿಕೆಗಳಲ್ಲಿ ತೊಡಗಿದ್ದರು. ಒಂದು ತಲೆಮಾರಿನಷ್ಟು ಅವಧಿಯ ಅನಂತರ ಡಕಾರ್ ನಗರ ಪ್ರಾಮುಖ್ಯ ಗಳಿಸಿತು. 1885ರಲ್ಲಿ ಪ್ರಾರಂಭಿಸಲಾದ ಸೇಂಟ್ ಲೂಯಿ-ಡಕಾರ್ ರೈಲುಮಾರ್ಗದಿಂದ ನಗರ ಶ್ರೀಘ್ರವಾಗಿ ಬೆಳೆಯತೊಡಗಿತು. 1923ರಲ್ಲಿ ನೈಜರ್ ನದಿಯ ದಡದಲ್ಲಿರುವ ಬಾಮಕೋ ನಗರದೊಂದಿಗೆ ರೈಲ್ವೆ ಸಂಪರ್ಕ ಏರ್ಪಟ್ಟಿತು. ಗ್ಯಾಂಬೀಯ ಫ್ರೆಂಚರ ಕೈವಶವಾಗದಿದ್ದುದು ಡಕಾರ್ ನಗರದ ಅಭಿವೃದ್ಧಿಗೆ ಪರೋಕ್ಷವಾಗಿ ನೆರವಾಯಿತು. ಇಲ್ಲದಿದ್ದಲ್ಲಿ ಅದೇ ಫ್ರೆಂಚರ ನೆಲೆಯಾಗುತ್ತಿತ್ತು. ಇದಕ್ಕೆ ಫ್ರೆಂಚ್ ಪಶ್ಚಿಮ ಆಫ್ರಿಕದಲ್ಲಿ ಮಹತ್ತ್ವದ ಸ್ಥಾನ ದೊರಕಿತು, 1924-1946ರಲ್ಲಿ ನೆರೆಯ ಗಾರೇ ಮತ್ತು ರೂಫೀಸ್ಕ್ ನಗರಗಳೂ ಸೇರಿದಂತೆ ಇದೊಂದು ಸ್ವಾಯತ್ತ ಪ್ರದೇಶದಂತೆ ವರ್ತಿಸಿತು. 1946ರಲ್ಲಿ ಇದು ಸೆನಿಗಾಲಿನೊಂದಿಗೆ ಮತ್ತೆ ವಿಲೀನಗೊಂಡಿತು. ಎರಡನೆಯ ಮಹಾಯುದ್ಧದ ಅವಧಿಯಲ್ಲಿ ಫ್ರಾನ್ಸ್ ಜರ್ಮನಿಗೆ ಶರಣಾದಾಗ ಇಲ್ಲಿಯ ಸ್ಥಳೀಯ ಸರ್ಕಾರ ಜರ್ಮನಿಯ ಅಧೀನದಲ್ಲಿದ್ದ ಫ್ರೆಂಚ್ ಕೈಗೊಂಬೆ ಸರ್ಕಾರದ ಅಧಿಕಾರವನ್ನು ಮಾನ್ಯಮಾಡಿತು. ಇದರಿಂದ ಕೋಪಗೊಂಡ ಸ್ವತಂತ್ರ ಫ್ರೆಂಚ್ ಮತ್ತು ಬ್ರಿಟಿಷ್ ನೌಕಾಪಡೆಗಳು ಇದರ ಮೇಲೆ ದಾಳಿ ಮಾಡಿದವು. ಆ ದಾಳಿಗಳು ಹೆಚ್ಚು ಯಶಸ್ವಿಯಾಗಲಿಲ್ಲ. ಮುಂದೆ 1943ರಲ್ಲಿ ಫ್ರೆಂಚ್ ರಾಷ್ಟ್ರೀಯ ವಿಮೋಚನಾ ಸಮಿತಿ ಪಶ್ಚಿಮ ಆಫ್ರಿಕಕ್ಕೆ ಗವರ್ನರ್ ಒಬ್ಬನನ್ನು ನೇಮಿಸಿದಾಗ, ಈ ಎರಡು ಮಿತ್ರರಾಷ್ಟ್ರಗಳು ಇಲ್ಲಿ ವಾಯು ಹಾಗೂ ನೌಕಾಯಾನ ಸೌಲಭ್ಯಗಳನ್ನು ಪಡೆದುಕೊಂಡುವು. ಫ್ರೆಂಚ್ ಸಮುದಾಯಕ್ಕೆ ಸೇರಿದಂತೆ, ಸೆನಿಗಾಲ್ ಗಣರಾಜ್ಯದ ಗಡಿಗಳನ್ನು ಪುನರ್ನಿರ್ಧರಿಸಿದಾಗ, ಡಕಾರ್ ಸೆನಿಗಾಲ್ ಗಣರಾಜ್ಯದ ರಾಜಧಾನಿಯಾಗಿ ಪರಿಣಮಿಸಿತು.

ಡಕಾರ್ ನಗರದಲ್ಲಿ ಹಾಗೂ ಅದರ ನೆರೆಹೊರೆಯಲ್ಲಿ ಜವಳಿ ಗಿರಣಿಗಳು, ಹಿಟ್ಟಿನ ಗಿರಣಿಗಳು, ಒಂದು ಸಿಮೆಂಟ್ ಕಾರ್ಖಾನೆ, ಮತ್ಸ್ಯ, ಶೈತ್ಯಾಗಾರ ಮೊದಲಾದುವು ಸ್ಥಾಪಿತವಾಗಿವೆ. ನೆಲಗಡಲೆ ಇದರ ಸುತ್ತಿನ ಒಂದು ಪ್ರಮುಖ ಬೆಳೆಯಾಗಿರುವುದರಿಂದ ಎಣ್ಣೆ ಗಿರಣಿಯನ್ನು ಸ್ಥಾಪಿಸಲಾಗಿದೆ. ಉಡುಪುಗಳ ತಯಾರಿಕೆ ಒಂದು ಮುಖ್ಯ ಕೈಕಸುಬು. ಇಟ್ಟಿಗೆ, ಸಾಬೂನು, ಸಿಗರೇಟ್ ಮುಂತಾದವೂ ತಯಾರಾಗುತ್ತವೆ. ಇಲ್ಲಿಂದ ನೆಲಗಡಲೆ ಎಣ್ಣೆ, ಸುಣ್ಣ ಮೊದಲಾದುವನ್ನು ರಫ್ತುಮಾಡಲಾಗುತ್ತದೆ. ತೈಲ (ಇಂಧನ), ಕಲ್ಲಿದ್ದಲು, ಅಕ್ಕಿ, ಸಕ್ಕರೆ, ಮದ್ಯ ಇವು ಮುಖ್ಯ ಆಮದುಗಳು.

ಮಧ್ಯ ಆಫ್ರಿಕದಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾಗಿರುವ ವೈದ್ಯಕೀಯ ಕೇಂದ್ರವೊಂದು ಇಲ್ಲಿದೆ. ಇದರಲ್ಲಿ ಅನೇಕ ಆಸ್ಪತ್ರೆಗಳೂ, ಹೊರರೋಗಿಗಳ ಚಿಕಿತ್ಸಾ ಕೇಂದ್ರಗಳೂ, ಪ್ಯಾಶ್ಚರ್ ಸಂಶೋಧನ ಸಂಸ್ಥೆಯೂ ಇವೆ. 1957ರಲ್ಲಿ ಇಲ್ಲಿ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಆಡಳಿತ ತರಬೇತು, ಅಧ್ಯಾಪಕರ ತರಬೇತು ಹಾಗೂ ಎಂಜಿನಿಯರಿಂಗ್ ಕಾಲೇಜುಗಳಿವೆ. ವೈಜ್ಞಾನಿಕ ಸಂಶೋಧನೆ ಹಾಗೂ ವಸ್ತುಸಂಗ್ರಹಾಲಯಗಳ ಮೇಲ್ವಿಚಾರಣೆಗೆಂದೇ ಸ್ಥಾಪಿತವಾಗಿರುವ ಒಂದು ಸಂಸ್ಥೆ ಇಲ್ಲಿದೆ. ರೋಮನ್ ಕ್ಯಾತೊಲಿಕರಿಗೆ ಸೇರಿದ ಒಂದು ಚರ್ಚ್ ಇಲ್ಲುಂಟು. ಇಲ್ಲಿಯ ಇತರ ಆಕರ್ಷಣೆಗಳೆಂದರೆ ಗವರ್ನರನ ಅರಮನೆ, ಸಾಗರ ತೀರದ ಭವ್ಯ ಹೋಟೆಲ್ ಮತ್ತು ಬಂದರು.										(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ